ಅತಿಕ್ರಮ
	
ತನಗೆ ಸ್ವಂತ ಹಕ್ಕಿಲ್ಲದೆ ಬೇರೊಬ್ಬ ವ್ಯಕ್ತಿಯ ಮೇಲೆ ಅಥವಾ ಅವನ ಸ್ಥಿರ, ಚರಾಸ್ತಿಯ ಮೇಲೆ ಮಾಡುವ ಆಕ್ರಮಣಕ್ಕೆ, ಅತಿಚಾರಕ್ಕೆ ಈ ಹೆಸರಿದೆ (ಟ್ರೆಸ್‍ಪಾಸ್). ಈಗ ಸಾಮಾನ್ಯವಾಗಿ ಇದು ಸ್ಥಿರಾಸ್ತಿಗೇ ಸಂಬಂಧಿಸುತ್ತದೆ. ಒಬ್ಬನ ಅಧೀನ ಮತ್ತು ಅನುಭೋಗದಲ್ಲಿರುವ, ಸ್ಪಷ್ಟವಾದ ರೂಪರೇಖೆಯಿಂದ ಸೀಮಿತವಾದ ಸ್ಥಿರಾಸ್ತಿಯ ಮೇಲೆ ನಿಷ್ಕಾರಣ ಆಕ್ರಮಣ ಮಾಡುವುದು ಸಿವಿಲ್, ಕ್ರಿಮಿನಲ್ ಅಥವಾ ಎರಡು ಬಗೆಯ ಅತಿಕ್ರಮವಾಗಬಹುದು. ಹೀಗೆಯೇ ಮೀನುಗಾರಿಕೆಯ ಹಕ್ಕು, ನೀರಿನ ಹಕ್ಕು, ಹೊಳೆ ದಾಟಿಸುವ ದೋಣಿ ನಡೆಸುವ ಹಕ್ಕು, ಒಕ್ಕಲುತನದ ಹಕ್ಕು ಮುಂತಾದ ಅಮೂರ್ತಸ್ವರೂಪದ ಹಕ್ಕುಗಳನ್ನು ಅತಿಕ್ರಮಿಸುವುದೂ ಸ್ಥಿರಾಸ್ತಿಯ ಆಕ್ರಮಣದ ಅರ್ಥವ್ಯಾಪ್ತಿಯೊಳಗೆ ಬರುತ್ತದೆ. ಆಕ್ರಮಣಕಾರನಿಂದ ಉಚ್ಚಾಟನೆಗೊಂಡ ಒಡೆಯ ಪುನಃ ಸಂಬಂಧಪಟ್ಟ ಆಸ್ತಿಯನ್ನು ಪ್ರವೇಶಿಸಿದರೆ ಒಡೆಯನ ಸ್ವಾಧೀನದ ಹಕ್ಕು ಪುನಃ ಊರ್ಜಿತಗೊಳ್ಳುತ್ತದೆ. ಆದರೆ ಆಸ್ತಿಯ ಪರಿಪೂರ್ಣ ಸ್ವಾಧೀನವನ್ನು ಕಳೆದುಕೊಂಡ ಒಡೆಯ ಆಕ್ರಮಣ ಪ್ರತಿಬಂಧದ ಬಗ್ಗೆ. ಆಕ್ರಮಣಕಾರನನ್ನು ಆಸ್ತಿಯಿಂದ ಉಚ್ಚಾಟನೆ ಮಾಡುವ ಬಗ್ಗೆ ಕ್ರಮ ಕೈಗೊಳಲ್ಳು ಶಕ್ಯವಿಲ್ಲ. ತಾನು ಬಾಡಿಗೆಗೆ ಅಥವಾ ಗೇಣಿಗೆ ಕೊಟ್ಟ ಆಸ್ತಿಯಲ್ಲಿ ಅಂಥ ಬಾಡಿಗೆ ಅಥವಾ ಗೇಣಿಯ ಅವಧಿ ಊರ್ಜಿತದಲ್ಲಿರುವಾಗ ಒಡೆಯ ಅದನ್ನು ಪ್ರವೇಶಿಸುವುದು ಆಕ್ರಮಣವಾಗುತ್ತದೆ. ಅಲ್ಲದೆ ಅಂಥ ಆಸ್ತಿಯ ಮೇಲೆ ಅಕ್ರಮ ಮಾಡುವ ಮೂರನೆಯವನೊಬ್ಬನ ಮೇಲೆ ಒಡೆಯನಾದವನು ಸ್ವತಂತ್ರವಾಗಿ ಕ್ರಮ ಕೈಗೊಳ್ಳಲಾರ. ಆದರೆ ಬಾಡಿಗೆದಾರ ಅಥವಾ ಗೇಣಿದಾರ ಅಂಥ ಕ್ರಮವನ್ನು ಕೈಗೊಳ್ಳಬಲ್ಲ. 
	
ತನಗೆ ಸೇರದ ಆಸ್ತಿಯಲ್ಲಿ (ಉದಾ: ಜಮೀನು) ಇರುವುದು, ಆಸ್ತಿಯ ರೂಪ ಕೆಡಿಸುವುದು, ಜಾನುವಾರುಗಳನ್ನು ಆಸ್ತಿಯೊಳಗೆ ಹೋಗಬಿಡುವುದು-ಇವೆಲ್ಲ ಅತಿಕ್ರಮಗಳೇ ಆಗಿವೆ. ಇನ್ನೊಬ್ಬನ ಆಸ್ತಿಯೊಳಗೆ ಕಾಲಿಡದಿದ್ದರೂ ಅದನ್ನು ಬೆರಳಿನಿಂದ ಮುಟ್ಟುವುದೂ ಆಕ್ರಮಣವೇ. ತಾನು ಸ್ವತಃ ಅಲ್ಲದಿದ್ದರೂ ತನ್ನ ಸೇವಕನಿಂದ ಅಥವಾ ಪ್ರತಿನಿಧಿಗಳ ಅಥವಾ ಜಾನುವಾರುಗಳ ಮೂಲಕ ಇತರರ ಆಸ್ತಿಯಲ್ಲಿ ಅಕ್ರಮಪ್ರವೇಶ ಮಾಡುವುದು, ಆಸ್ತಿಯನ್ನು ಜಫ್ತಿಮಾಡುವುದು ಆಕ್ರಮಣಗಳೇ. ಆಸ್ತಿಯ ಆಕ್ರಮಣ ನೆಲದಡಿಯಲ್ಲಿ ಅಗೆಯುವುದರ ಮೂಲಕವೂ ನಡೆಯಬಲ್ಲದು. ಸ್ಥಿರಾಸ್ತಿಯ ಒಡೆಯ ನೆಲದಿಂದ ಆಕಾಶದವರೆಗೂ ಒಡೆಯನೆಂಬ ಶಾಸನ ಸೂಕ್ತವಿದ್ದರೂ ಕಟ್ಟಡಗಳಿಂದ ಎತ್ತರದಲ್ಲಿನ ವಿಮಾನಗಳ ಹಾರಾಟ ಅತಿಕ್ರಮವೆನಿಸುವುದಿಲ್ಲ. ಆದರೆ ಕಟ್ಟಡಗಳಿಗಿಂತ ಕೆಳಗೆ ಅವು ಬಂದಾಗ ಅತಿಕ್ರಮವಾಗುತ್ತದೆ. ಒಬ್ಬನ ಸ್ಥಿರಾಸ್ತಿಯ ಮೇಲೆ ಬೇರೆ ಆಸ್ತಿಯಿಂದ ಬಾಗಿರುವ ಮರ ಹಬ್ಬಿರುವ ಕೊಂಬೆ ಹಾದಿರುವ ಕಟ್ಟಡದ ಅಂಶಗಳು ಆಕ್ರಮಣಗಳು. 
	
ಅವಿಭಕ್ತ ಕುಟುಂಬಕ್ಕೆ ಸೇರಿದವರು ಅಥವಾ ಅವಿಭಕ್ತ ಬಾಡಿಗೆದಾರರು ಅಥವಾ ಗೇಣಿದಾರರು ಆಸ್ತಿಯ ಅನುಭೋಗ ಮಾಡುತ್ತಿರುವಾಗ ಒಬ್ಬನ ಪಾಲಿನ ಆಸ್ತಿಗೆ ಇನ್ನೊಬ್ಬನು ಪ್ರವೇಶಿಸಿದರೆ ಅದು ಅಕ್ರಮ ಪ್ರವೇಶವಾಗುವುದಿಲ್ಲ. ಅಂತೆಯೇ ಅಧಿಕಾರಿಗಳು ಅಥವಾ ನೌಕರರು ತಮ್ಮ ಶಾಸನಬದ್ಧ ಕಾರ್ಯನಿರ್ವಹಣೆಯ ಕಾಲದಲ್ಲಿ ಯಾರಾದರೊಬ್ಬರು ಆಸ್ತಿಯನ್ನು ಪ್ರವೇಶಿಸುವುದು ಆಕ್ರಮಣವಲ್ಲ. 
	
ಮತ್ತೊಬ್ಬನಿಂದಾಗಿ ಇಲ್ಲವೇ ದೈವಲೀಲೆಯಿಂದ (ಪ್ರವಾಹದಿಂದ ಕೊಚ್ಚಿ, ಬಿರುಗಾಳಿಯಿಂದ ಹಾರಿ) ತನ್ನದೊಂದು ಸಾಮಾನು ಇನ್ನೊಬ್ಬನ ಆಸ್ತಿಯೊಳಗೆ ಇಡಲ್ಪಟ್ಟಿದ್ದರೆ ಅದನ್ನು ವಾಪಸು ತೆಗೆದುಕೊಳ್ಳಲು ಆ ಆಸ್ತಿಯೊಳಗೆ ಪ್ರವೇಶಿಸುವುದು ಆಕ್ರಮಣವಾಗದು. ಆದರೆ ತನ್ನದೇ ಅಕೃತ್ಯದಿಂದ ಹಾಗೆ ಸಾಮಾನು ಇಡಲ್ಪಟ್ಟಿದ್ದು ಅದಕ್ಕಾಗಿ ಪ್ರವೇಶಿಸಿದರೆ ಅಕ್ರಮ ಪ್ರವೇಶವಾಗುತ್ತದೆ. ತನಗೆ ಸ್ವಾಮಿತ್ವ ಅಥವಾ ಇತರ ಹಕ್ಕಿದೆಯೆಂಬ ಪ್ರಾಮಾಣಿಕ ನಂಬಿಕೆಯ ಬಲದಲ್ಲಿ ಇನ್ನೊಬ್ಬನ ಆಸ್ತಿಯನ್ನು ಪ್ರವೇಶಿಸುವುದು ಆಕ್ರಮಣವಲ್ಲವಾದರೂ ಸಂದೇಹನಿವಾರಣೆಯಾದ ಮೇಲೆ ಕಾನೂನಿನಂತೆ ನಡೆಯಬೇಕಾಗುವುದು. 
	
ಕ್ರಮಬದ್ಧವಾಗಿಯೇ ಒಬ್ಬನ ಆಸ್ತಿಯೊಳಗೆ ಪ್ರವೇಶಿಸಿ ಬಳಿಕ ಅಲ್ಲಿ ಕಳ್ಳತನವೇ ಮುಂತಾದ ಅಕೃತ್ಯವನ್ನು ಮಾಡಿದರೆ ಅಂಥ ಪ್ರವೇಶ ಮೂಲದಿಂದಲೇ ಅಕ್ರಮ ಪ್ರವೇಶವಾಗುತ್ತದೆ; ಇದು ಆಸ್ತಿಯ ಪ್ರವೇಶಾನಂತರ ತಮ್ಮ ಅಧಿಕಾರ ದುರುಪಯೋಗ ಪಡಿಸುವ ಅಧಿಕಾರಿಗಳ ಕೃತ್ಯಕ್ಕೂ ಅನ್ವಯಿಸುತ್ತದೆ. 
	
ಯೋಗ್ಯವಾದ ಬಲಪ್ರಯೋಗದ ಮೂಲಕ ಆಕ್ರಮಣಕಾರನನ್ನು ಹೊರದಬ್ಬುವ ಹಕ್ಕು ಆಸ್ತಿಯ ಒಡೆಯನಿಗೆ ಇದೆ. ಅಕ್ರಮಪ್ರವೇಶದ ವಿರುದ್ಧ ಕ್ಷಿಪ್ರಕ್ರಮ ಕೈಗೊಳ್ಳದಿದರೆ ತನ್ನ ಒಡೆತನ ಮತ್ತು ಸ್ವಾಧೀನತೆಗಳನ್ನು ಸಿದ್ಧಪಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಕ್ರಮಪ್ರವೇಶಮಾಡಿದವನು ಪರಿಹಾರ ಧನವನ್ನೂ ತಾನು ಅನುಭೋಗಿಸಿದ ಅದರ ಆದಾಯವನ್ನು ಒಡೆಯನಿಗೆ ತೆರಲು ಬದ್ಧ.									
(ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ